ಜಪಾನೀ ಕಲೆ -
ಜಪಾನೀ ಕಲೆಯ ಉಗಮ ಚೀನ ದೇಶದಲ್ಲಿಯೇ ಆಯಿತು. ಕ್ರಿ.ಶ. ಏಳನೆಯ ಶತಮಾನಕ್ಕೆ ಮುಂಚೆ ಜಪಾನಿನಲ್ಲಿ ಕಲಾತ್ಮಕ ದೇವಾಲಯಗಳಾಗಲಿ ಕಲಾಕೃತಿಗಳಾಗಲಿ ಇದ್ದುವೆನ್ನಲು ಸ್ಪಷ್ಟವಾದ ಲಿಖಿತಾಧಾರಗಳಿಲ್ಲ. ಆ ವೇಳೆಗಾಗಲೇ ಚೀನದಲ್ಲಿ ಎಲ್ಲ ಕಲೆಗಳೂ ಸಂಪನ್ನವಾಗಿ ಬೆಳೆದಿದ್ದುವು. ಕ್ರಿ.ಶ. ಆರನೆಯ ಶತಮಾನದ ಅಂತ್ಯಭಾಗದಲ್ಲಿ ಜಪಾನಿಗೆ ಬೌದ್ಧಧರ್ಮವನ್ನು ಕೊಂಡುಹೋದವರು ಚೀನೀ ಜನ ಮತ್ತು ಕೊರಿಯ ಜನ. ಇಲ್ಲಿಯ ಕಲಾವಿದರೇ ಧರ್ಮದೊಂದಿಗೆ ಕಲಾಕೃತಿಗಳನ್ನೂ ಕಲೆಯ ವಿಚಾರದ ಕಲ್ಪನೆಗಳನ್ನೂ ಚೀನದಿಂದ ಜಪಾನಿಗೆ ತಂದವರು. ಈ ಕಾರಣದಿಂದ ಮುಂದಿನ ಮೂರು ಶತಮಾನಗಳವರೆಗೆ ಜಪಾನಿನಲ್ಲಿ ಮೂಡಿ ಬಂದ ಕಲೆಯೆಲ್ಲ ಚೀನೀಕಲೆಯ ಪ್ರಭಾವವನ್ನು ವಿಶೇಷವಾಗಿ ತಳೆದಿದ್ದುವು. ಇದು ಜಪಾನಿಗೆ ಮಾತ್ರ ಸೀಮಿತವಾದ ಪ್ರಭಾವವಲ್ಲ. ಕೊರಿಯ, ಮಧ್ಯ ಏಷ್ಯ, ಟಿಬೆಟ್, ಮಂಗೋಲಿಯ, ಅನ್ನಾಂ-ಈ ದೇಶಗಳ ಕಲೆಗಳೆಲ್ಲ ಚೀನೀ ಕಲೆಯ ಸ್ಫೂರ್ತಿಯಿಂದಲೇ ಮೈದಳೆದವು.

ಕಲಾಪ್ರಕಾರಗಳು ಮಾತ್ರವಲ್ಲದೆ, ಹಲವಾರು ಸಂವಿಧಾನಗಳೂ ಚೀನೀಯರಿಂದಲೇ ಈ ಪ್ರದೇಶಗಳಿಗೆ ಬಂದುವು. ಹೀಗಾಗಿ ಚೀನೀಕಲೆಯನ್ನು ಅಧ್ಯಯನ ಮಾಡಿದಲ್ಲದೆ ಜಪಾನೀ ಕಲೆ ಅರ್ಥವಾಗುವುದಿಲ್ಲ ಎಂದು ಹೇಳುತ್ತಾರೆ.

ಕ್ರಿ.ಶ. 756ರಲ್ಲಿ ಜಪಾನಿನ ಚಕ್ರವರ್ತಿಯಾಗಿದ್ದ ಷೋಮು ಎಂಬಾತ ತೀರಿಕೊಂಡ ಮೇಲೆ ಅವನ ಸ್ವೀಯ ಸಾಮಾನುಗಳನ್ನೆಲ್ಲ ನಾರಾದ ತೋಡೈಜಿ ದೇವಾಲಯಕ್ಕೆ ದಾನ ಮಾಡಿದರು. ಇವೆಲ್ಲವನ್ನೂ ಷೋಸೊಯ್ನ್ ವಿಹಾರದಲ್ಲಿ ಇಂದಿಗೂ ನಿಕ್ಷೇಪ ಮಾಡಿದ್ದಾರೆ. ಇವುಗಳಲ್ಲಿ ಎಂಟನೆಯ ಶತಮಾನದ ಅತ್ಯಮೌಲ್ಯ ಕೈಕೆಲಸಗಳು ಸೇರಿವೆ. ಇವೆಲ್ಲವೂ ಚೀನೀ ಕಲಾಕೃತಿಗಳೇ ಎನ್ನುವುದರಲ್ಲಿ ಸಂದೇಹವಿಲ್ಲ. ಆ ಕಾಲದಲ್ಲಿ ಜಪಾನಿನಲ್ಲಿ ತಯಾರಾದ ವಸ್ತುಗಳೂ ಟಾಂಗ್ ಯುಗದ ಚೀನೀ ಕಲೆಯ ಪ್ರಕಾರಗಳನ್ನು ಅನುಕರಿಸಿದ್ದುವು. ಚೀನೀ ದೇವಾಲಯಗಳೂ ವಿಹಾರಗಳೂ ಅರಮನೆಗಳೂ ಬಹುಮಟ್ಟಿಗೆ ಮರದಲ್ಲಿಯೇ ಮಾಡಿದುವು. ಇದೇ ಪದ್ಧತಿ ಜಪಾನಿನಲ್ಲೂ ಬಳಕೆಗೆ ಬಂತು. ಜಪಾನಿನಲ್ಲಿ ಪರದೇಶಿಯರ ದಾಳಿ ಅಷ್ಟಾಗಿ ಇಲ್ಲದುದರಿಂದ ಈ ಮರದ ಕಟ್ಟಡಗಳು ಇಂದಿಗೂ ಉಳಿದು ಬಂದಿವೆ. ಜಗತ್ತಿನಲ್ಲೇ ಇವು ಅಸಾಮಾನ್ಯವಾದ ಕಲಾಕೃತಿಗಳು. ಅದೂ ನಾರಾದ ಷೋಸೊಯ್ನ್ ರಾಜಭಂಡಾರವನ್ನು ಅದ್ಭುತವಾದ್ದೆಂದು ಬಣ್ಣಿಸಿದ್ದಾರೆ, ದಾರು ವಾಸ್ತುವಲ್ಲದೆ ಹಿತ್ತಾಳೆ ಪಾತ್ರೆ, ವಿಗ್ರಹಗಳು, ಪೋರ್ಸಿಲಿನ್ ಸಾಮಾನುಗಳು, ಜೇಡ್ ಕೃತಿಗಳು, ಲಾಕ್ಷಾರಸದ ಕೃತಿಗಳು ಇವೆಲ್ಲವೂ ಚೀನದಿಂದಲೇ ಜಪಾನಿಗೆ ಬಂದುವು. ಈ ಕೊಡುಗೆಗಳಲ್ಲಿ ವರ್ಣಚಿತ್ರಕಲೆ ಪ್ರಮುಖವಾದುದು. ಸುಮಾರು ಎಂಟನೆಯ ಶತಮಾನದಲ್ಲಿ ನಾರಾದ ಬಳಿಯಿರುವ ಹೊರ್ಯೂಜಿ ಬೌದ್ಧ ದೇವಾಲಯದ ಗೋಡೆಗಳ ಮೇಲೆ ಸೊಗಸಾದ ವರ್ಣಚಿತ್ರಗಳು ಸಿದ್ಧವಾದುವು, ಶಿಲ್ಪಗಳು ಕಾಣಿಸಿಕೊಂಡುವು. ಈಚೆಗೆ ಈ ಕೃತಿಗಳೆಲ್ಲ ಗುಡಿಗೆ ಬಿದ್ದ ಬೆಂಕಿಯೊಂದರಲ್ಲಿ ನಾಶವಾದುವು.

ನಾರಾದ ಷೋಸೊಯ್ನ್‍ನಲ್ಲಿಯೂ ವರ್ಣಚಿತ್ರಗಳಿವೆ, ಶಿಲ್ಪಗಳಿವೆ, ಸಾವಿರಾರು ಉತ್ತಮ ಕಲಾಕೃತಿಗಳಿರುವ ಈ ರಾಜಭಂಡಾರವನ್ನು ಜಗತ್ತಿನ ಅತಿ ಪ್ರಾಚೀನ ವಸ್ತು ಸಂಗ್ರಹಾಲಯ ಎಂದು ಹೇಳುತ್ತಾರೆ. ಕ್ರಿ.ಶ. 756ರಲ್ಲಿ ಜಪಾನಿನ ಸಾಮ್ರಾಜ್ಞಿ ತನ್ನ ಮನೆಯಲ್ಲಿದ್ದ ವಿಶಿಷ್ಟ ವಸ್ತುಗಳನ್ನೂ ಬುದ್ಧನಿಗೆ ಅರ್ಪಣೆ ಮಾಡಿದಳಂತೆ. ಇದರಲ್ಲಿ ಪಾತ್ರೆ, ಉಡುಗೆ, ತೊಡುಗೆ, ಚೆಂದದ ವಸ್ತುಗಳು, ಆಟಿಗೆ ವಸ್ತುಗಳು ಎಲ್ಲವೂ ಇದ್ದುವು. ಇವು ಬಹುಮಟ್ಟಿಗೆ ಚೀನೀ ಪದ್ಧತಿಯ ಕೃತಿಗಳು. ಇವೆಲ್ಲವನ್ನೂ ನಿಕ್ಷೇಪ ಮಾಡಲು ಮರದ ಷೋಸೊಯ್ನ್ ಭವನವನ್ನು ನಿರ್ಮಿಸಿದರು. 

ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ಟಾಂಗ್ ರಾಜವಂಶದವರ ಪ್ರಭುತ್ವ ಚೀನದಲ್ಲಿ ದುರ್ಬಲವಾಗಲು ಪರಿಣಾಮವಾಗಿ ಜಪಾನೀಕಲೆಯ ಸಂವಿಧಾನಗಳೂ ಕಲ್ಪನೆಗಳೂ ಸ್ವತಂತ್ರವಾಗತೊಡಗಿದುವು. ಈ ವೇಳೆಗಾಗಲೇ ಬೌದ್ಧಧರ್ಮ ಅಲ್ಲಿ ಬೇರೂರಿ ಜನಜೀವನದ ಮೇಲೆ ಅನಿವಾರ್ಯವಾದ ಓತಪ್ರೋತವಾದ ಪ್ರಭಾವವನ್ನು ಮೂಡಿಸಿತ್ತು. ಇದೇ ಧರ್ಮ ಜಪಾನೀ ಕಲೆಯ ಸ್ಫೂರ್ತಿಯಾಗಿ ಪರಿಣಮಿಸಿತು. ಬೌದ್ಧ ಮತ್ತು ಜಪಾನಿನಲ್ಲಿ ಮೊದಲಿಗಿದ್ದ ಷಿಂಟೋ ಧರ್ಮಗಳ ಸಮನ್ವಯ ಒದಗಿ ಹೊಸದೊಂದು ದೃಷ್ಟಿ ಬೆಳೆಯತೊಡಗಿತು. ಈ ಸಂದರ್ಭದಲ್ಲಿ ಮೈದಳೆದ ಯಾಮಾಟೋ ಸಂಪ್ರದಾಯ ಶುದ್ಧಜಪಾನೀಸತ್ತ್ವವನ್ನು ಒಳಗೊಂಡು ಚೀನೀ ಪ್ರಭಾವದಿಂದ ಸ್ವತಂತ್ರವಾಗಿತ್ತು. ಆಗ ಸಿದ್ಧವಾದ ಧಾರ್ಮಿಕ, ಲೌಕಿಕ ಸಾಹಿತ್ಯದ ಗ್ರಂಥಗಳಲ್ಲಿ ಚಿತ್ರಣಗಳು ಅವಶ್ಯವಾದ ಅಂಗಗಳಂತೆ ಸೇರಿಬಂದುವು. ದೊಡ್ಡ ದೊಡ್ಡ ಸುರುಳಿಗಳ ಮೇಲೆ ಬಣ್ಣಬಣ್ಣದ ಚಿತ್ರಗಳನ್ನು ಮೂಡಿಸುವ ಪದ್ಧತಿ ಬಂತು. ಈ ಸುರುಳಿಗಳಿಗೆ ಜಪಾನೀ ಭಾಷೆಯಲ್ಲಿ ಮಾಕೀಮಾನಾ ಎನ್ನುತ್ತಾರೆ. ಜನಗಳ ನಿತ್ಯಜೀವನದ ಪ್ರಸಂಗಗಳನ್ನು ಅಧಿಕರಿಸಿಯೇ ಈ ಚಿತ್ರಗಳಿದ್ದುದು ಒಂದು ವೈಶಿಷ್ಟ್ಯ. ಈ ಚಿತ್ರಗಳಲ್ಲಿ ಚೀನೀ ಪ್ರಭಾವ ಇರಲೇ ಇಲ್ಲವೆಂದಲ್ಲ. ಜಪಾನೀ ಕಲೆಗಾರರು ಸಂವಿಧಾನಗಳ ಬಗ್ಗೆ, ಸಾಮಗ್ರಿಗಳ ಬಗ್ಗೆ ಸ್ವತಂತ್ರವಾದ ಪ್ರಯೋಗಗಳನ್ನು ನಡೆಸಲಾರಂಭಿಸಿದರು. ಚಿತ್ರನಿರೂಪಣೆಯ ವಸ್ತುಗಳ ವಿಚಾರವಾಗಿಯೂ ಸ್ವತಂತ್ರವಾದ ದೃಷ್ಟಿ ಬೆಳೆಯತೊಡಗಿತು. ಆದರೆ ಮೂಲಭೂತವಾಗಿ ಚೀನೀ ಸಂಪ್ರದಾಯವೇ ನಿಂತಿತ್ತು. ಹದಿಮೂರನೆಯ ಶತಮಾನದ ಆದಿಭಾಗದಲ್ಲಿ ಈ ಸುಪ್ತ ಚೀನೀ ಪ್ರಭಾವ ಮತ್ತೊಮ್ಮೆ ಸ್ಪಷ್ಟವಾಯಿತು. ಸೂಂಗ್ ರಾಜವಂಶ ಆಗ ಚೀನದಲ್ಲಿ ಪ್ರಭುತ್ವವನ್ನು ನಡೆಸುತ್ತಿತ್ತು. ರಸಿಕರಾದ ಈ ರಾಜರ ಆಶ್ರಯದಲ್ಲಿ ಚಿತ್ರಕಲೆ, ಶಿಲ್ಪ ಎರಡೂ ಮತ್ತೆ ವೈಭವದಿಂದ ತಲೆಯೆತ್ತಿಕೊಂಡುವು. ಇದರ ಪರಿಣಾಮ ಜಪಾನೀ ಕಲೆಯ ಮೇಲೂ ಆಯಿತು. ಚೀನೀ ಶೈಲಿಯ ಕೃತಿಗಳು ಕಾಣಿಸಿಕೊಳ್ಳತೊಡಗಿದುವು. ಚೀನದಲ್ಲಿ ಪ್ರಚುರವಾಗಿದ್ದ ಕರಿಶಾಯಿಯ ಚಿತ್ರಗಳು ಇಲ್ಲಿಯೂ ಬಳಕೆಗೆ ಬಂದುವು. ಅಲ್ಲಿದ್ದಂತೆ ನಿಸರ್ಗ, ಪ್ರಾಣಿಗಳು ಕಲಾಕೃತಿಗಳಿಗೆ ತುಂಬ ಸ್ಫೂರ್ತಿಯನ್ನು ಒದಗಿಸಲಾರಂಭಿಸಿದುವು.

	ಇದೇ ಸಮಯದಲ್ಲಿಯೇ ಹಲವಾರು ಜಪಾನಿ ಕಲಾಪದ್ಧತಿಗಳು ತಲೆಯೆತ್ತಿಕೊಂಡುವು. ಒಂದೊಂದು ಪದ್ಧತಿಯೂ ಅದರ ಪ್ರವರ್ತಕನ ಮನೆತನದಲ್ಲಿ ಉಳಿದು ಬರುವಂತೆ ವ್ಯವಸ್ಥೆ ಇತ್ತು. ಜಪಾನೀ ಕಲೆಗಾರರಲ್ಲಿ ಅತಿ ಪ್ರಖ್ಯಾತನಾದ ಸೆಷೂ (1420-1506) ಚೀನೀ ಪದ್ಧತಿಗಳನ್ನು ಅಳವಡಿಸಿಕೊಂಡು ಜಪಾನೀ ಶೈಲಿಯ ಪುನರುಜ್ಜೀವನ ಕಾರ್ಯದಲ್ಲಿ ತೊಡಗಿದ. ಮತ್ತೆ ಮುಂದಿನ ಶತಮಾನದಲ್ಲಿ ಚೀನೀ ಪ್ರಭಾವ ಹಿಂದೆ ಬಿತ್ತು. ಕ್ರಿ.ಶ. 1603ರಿಂದ 1868ರವರೆಗೂ ಪ್ರಚಲಿತವಾಗಿದ್ದ ಟೋಕೂಗಾವ ಯುಗದಲ್ಲಿ ಹೆಚ್ಚುಹೆಚ್ಚಾಗಿ ಸ್ವತಂತ್ರ ಜಪಾನೀ ಶೈಲಿಗಳು ಅಭಿವ್ಯಕ್ತವಾದುವು. ಆದರೂ ಚೀನೀ ಕಲಾಕೃತಿಗಳನ್ನು ಅಧ್ಯಯನ ಮಾಡುವ ಪದ್ಧತಿ ಜಪಾನಿನಲ್ಲಿ ಮುಂದುವರಿಯಿತು. ಜಪಾನೀ ಕಲಾವಿದರು ಚೀನೀ ವರ್ಣಚಿತ್ರಗಳ ಪ್ರತಿಕೃತಿಗಳನ್ನು ಅವಿರತವಾಗಿ ಮಾಡುತ್ತಿದ್ದರು; ಶ್ರೀಮಂತರು ಚೀನೀ ಕಲಾಕೃತಿಗಳ ಸಂಗ್ರಹವನ್ನು ಆಸ್ಥೆಯಿಂದ ಮಾಡುತ್ತಿದ್ದರು. ಹಲವಾರು ಚೀನೀ ಕಲೆಗಾರರ (ಫಾನ್, ಚಿನ್, ಷಿಟವೋ. ಛು ಟ ಮುಂತಾದವರ) ಚಿತ್ರಗಳು ಜಪಾನೀ ಸಂಗ್ರಹಗಳಲ್ಲೇ ಉಪಲಬ್ಧವಾಗಿವೆ. ಚೀನೀಕಲೆಗಾರ ಕೋ ಛ್ ಇ-ಪ್‍ಐ (1672-1734) ಎಂಬಾತ ಆರಂಭ ಮಾಡಿದ ಬೆರಳು ಚಿತ್ರಣ ಚೀನದಲ್ಲಿ ಅಷ್ಟಾಗಿ ಪ್ರವರ್ಧಮಾನಸ್ಥಿತಿಗೆ ಬರದೆ ಕೊರಿಯ ಮತ್ತು ಜಪಾನುಗಳಲ್ಲಿ ವಿಶೇಷವಾದ ಪುರಸ್ಕಾರ ಪಡೆಯಿತು. ಯಾಮಾಟೊ ಪದ್ಧತಿ ಮಾತ್ರ ಯಥಾಸ್ಥಿತಿ ಉಳಿಯಿತು. ಕಾಲಾನುಕ್ರಮದಲ್ಲಿ ಚೀನೀ ಪ್ರಭಾವ ಮತ್ತು ಯಾಮಾಟೊ ಶೈಲಿ ಎರಡರ ಸಂಗಮದಿಂದ ನವ್ಯವಾದ ಒಂದು ಸಂಪ್ರದಾಯ ಕಾಣಿಸಿಕೊಂಡಿತು. ಪ್ರಕೃತಿಯನ್ನು ವಿವಿಧ ಅಲಂಕರಣ ಕ್ರಿಯೆಗಳಿಂದ ಸುಭಗವನ್ನಾಗಿ ವಿಭವಯುಕ್ತವನ್ನಾಗಿ ಚಿತ್ರಿಸುವ ಪರಿಪಾಠ ಈ ಸಂಪ್ರದಾಯದಲ್ಲಿ ಬಂತು. ನಿಸರ್ಗದ ಹಿನ್ನೆಲೆಗೆ ಬಂಗಾರದ ಬಣ್ಣಗಳನ್ನು ಮೂಡಿಸುವ ಪದ್ಧತಿಯೂ ಈಗಲೇ ಆರಂಭವಾಯಿತು. ವರ್ಣವಿನ್ಯಾಸದಲ್ಲಿ ನವ್ಯಪ್ರಯೋಗಗಳು ನಡೆದುವು. ಸಂವಿಧಾನದ ನಿರ್ದಿಷ್ಟ ಮತ್ತು ನಿಷ್ಠ ಅಭಿವ್ಯಕ್ತಿ ಜಪಾನಿನ ಮನೋಧರ್ಮಕ್ಕೆ ಒಗ್ಗಿತು. ಕನೊ ಪದ್ಧತಿಯೆಂಬುದು ಆರಂಭದಲ್ಲಿ ಚೀನೀ ಪ್ರಭಾವವನ್ನೇ ವಿಶೇಷವಾಗಿ ತಳೆದಿತ್ತು. ಆದರೆ ಬರುಬರುತ್ತ ಈ ಹೊಸ ವಿವರಗಳನ್ನು ಅಳವಡಿಸಿಕೊಂಡು ಶುದ್ಧ ಜಪಾನೀ ಸಂಪ್ರದಾಯವಾಗಿ ಉಳಿಯಿತು. ಚೀನ ಮತ್ತು ಕೊರಿಯ ದೇಶಗಳಿಂದ ಜಪಾನಿಗೆ ಬಂದ ಧ್ಯಾನ ಪಂಥ (ಚೀನೀ ಭಾಷೆಯಲ್ಲಿ ಛ-ಅನ್, ಜಪಾನಿನ ಭಾಷೆಯಲ್ಲಿ ಜೆóನ್) ಇಲ್ಲಿನ ಜನರ ಮೇಲೆ ತುಂಬ ಪ್ರಭಾವ ಬೀರಿತು. ಧ್ಯಾನ ಪಂಥದ ಮುಖ್ಯ ವಿವರಗಳಾದ ಏಕಾಂತ, ಶಾಂತಿ, ನಿಸರ್ಗದೊಂದಿಗೆ ತಾದಾತ್ಮ್ಯ ಏಕಚಿತ್ತದ ಅನುಸಂಧಾನ ಇವು ಕಲೆಗಾರರ ಚೈತನ್ಯವನ್ನು ಉಜ್ಜ್ವಲ ಗೊಳಿಸಿದುವು. ಧ್ಯಾನಪಂಥದ ವಿವರಗಳನ್ನು ಚಿತ್ರಿಸುವ ಕಲಾಕೃತಿಗಳೇ ಜಪಾನಿನಲ್ಲಿ ತುಂಬ ಪ್ರಚಲಿತವಾಗಿವೆ. ಅದೂ ಬೋಧಿಧರ್ಮನ (ಜಪಾನೀ ಭಾಷೆಯಲ್ಲಿ ದರುಮ) ಚಿತ್ರಣ ತುಂಬ ಸ್ವಾರಸ್ಯವಾಗಿ, ಸರಳ ಗಂಭೀರವಾಗಿ ಮೂಡಿಬಂದಿದೆ. ಈತ ಧ್ಯಾನ ಪಂಥದ ಪ್ರವರ್ತಕನೆಂದು ಪ್ರಸಿದ್ಧನಾಗಿದ್ದಾನೆ. ಕಾಂಚೀಪುರದವನಾದ ಈತ ಬೌದ್ಧಭಿಕ್ಷುವಾಗಿ ಚೀನಕ್ಕೆ ತೆರಳಿ ಅಲ್ಲಿ ಧ್ಯಾನ ಪಂಥವನ್ನು ಆರಂಭಿಸಿದನೆಂದು ಪ್ರತೀತಿ. ಇವನು ಜಪಾನೀ ಕಲಾವಿದರಿಗೆ ತುಂಬ ಪ್ರಿಯನಾದ ವಸ್ತು.

	ಇವನನ್ನು ವಿವಿಧ ಭಂಗಿಗಳಲ್ಲಿ ಚಿತ್ರಿಸಿದ್ದಾರೆ. ಧ್ಯಾನ ಪಂಥವಲ್ಲದೆ ಬೌದ್ಧ ಧರ್ಮದ ಮಹಾಯಾನ ಶಾಖೆಗಳೂ ಪ್ರವೃತ್ತವಾಗಿ ಈ ಶಾಖೆಗಳ ದೇವದೇವತೆಗಳೂ ಬುದ್ಧ ಬೋಧಿಸತ್ತ್ವರೂ ಅರ್ಹಂತರೂ ಮುನಿಗಳೂ ಕಲಾವಿದರ ಹೃದಯವನ್ನು ಹಿಡಿದು ಕಲಾಕೃತಿಗಳಲ್ಲಿ ಮೂಡಿಬಂದರು. ಅಮಿತಾಭ ಬುದ್ಧ (ಜಪಾನೀ ಭಾಷೆಯಲ್ಲಿ ಅಮಿದ), ಮಂಜುಶ್ರೀ (ಜಪಾನೀ ಭಾಷೆಯಲ್ಲಿ ಮೊಂಜು), ಅವಲೋಕಿತೇಶ್ವರ, ತಾರಾ, ಪ್ರಜ್ಞಾಪಾರಮಿತ ಮುಂತಾದ ಮಹಾಯಾನ ದೇವತೆಗಳ ವರ್ಣಚಿತ್ರಗಳೂ ಶಿಲ್ಪಗಳೂ ಪ್ರಸಿದ್ಧವಾಗಿವೆ. ಇವಲ್ಲದೆ ತಾಂತ್ರಿಕ ಮಂಡಲಗಳೂ ಯಂತ್ರಸ್ಥಿತ ದೇವತೆಗಳೂ ಗಣಪತಿಯುಗ್ಮ, ಗಣೇಶಾನೀ ಮುಂತಾದುವೂ ಕಲೆಯಲ್ಲಿ ಬಂದುವು. ಇಬ್ಬರು ಗಣಪತಿಗಳು ಪರಸ್ಪರ ಆಲಿಂಗನ ಮಾಡಿಕೊಳ್ಳುತ್ತಿರುವ ಶಿಲ್ಪಗಳೂ ಚಿತ್ರಗಳೂ ಅಲ್ಲಿ ತುಂಬ ಪ್ರಸಿದ್ಧವಾಗಿವೆ.

	ಹೀಗೆಯೇ ಪರ್ವತಗಳನ್ನು ದೇವತೆಗಳ ಮೂರ್ತಸ್ವರೂಪವೆಂಬ ಜಪಾನೀ ಕಲ್ಪನೆಯ ಆಧಾರದ ಮೇಲೆ ಆ ದೇಶದ ಪರ್ವತಗಳಲ್ಲಿ ಹಲವು ನಿಸರ್ಗ ಸುಂದರವಾದುವು ಕಲಾವಸ್ತುಗಳಾಗಿ ಪರಿಗೃಹೀತವಾದುವು. ಅವುಗಳ ಚಿತ್ರನ ಕಲೆಗಾರರ ಉತ್ಸಾಹವನ್ನು ಮಿಡಿಯಿತು. ಈ ಪರ್ವತಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಫೂಜೀಯಾಮ ಎಂಬ ಪವಿತ್ರ ಪರ್ವತ. ಭಾರತದ ಕೈಲಾಸಪರ್ವತವಿದ್ದಂತೆ ಅವರಲ್ಲಿ ಅದು. ಜಪಾನೀ ಕಲೆಗಾರರೂ ಕವಿಗಳೂ ಅದನ್ನು ವಿವಿಧ ಭಂಗಿಗಳಲ್ಲಿ ಚಿತ್ರಿಸಿದ್ದಾರೆ. ಜಪಾನೀ ಕಲೆಯಲ್ಲಿ ಫೂಜೀಯಾಮ ದೇವತಾತ್ಮನೆಂದು ಹಿರಿದಾದ ಸ್ಥಾನವನ್ನು ಪಡೆದಿದೆ.

ಹದಿನಾರನೆಯ ಶತಮಾನದ ಅನಂತರ ಮೂಡಿಸುವ ಅಂತರಪಟ ಫಲಕಗಳು ವಿಶೇಷವಾಗಿ ಪ್ರಚಾರಕ್ಕೆ ಬಂದುವು. ಜಪಾನೀ ಭಾಷೆಯಲ್ಲಿ ಇವನ್ನು ಬೋಬ್ಯು ಎನ್ನುತ್ತಾರೆ. ಇವುಗಳ ಮೇಲೆಯೂ ಚಲಿಸುವ ಗೋಡೆಗಳ (ಜಪಾನೀ ಭಾಷೆಯಲ್ಲಿ ಫುಸುಮ) ಮೇಲೆಯೂ ನಾಜೂಕಾದ ನಿಸರ್ಗಚಿತ್ರಗಳನ್ನು ಬಿಡಿಸುವ ಪದ್ಧತಿ ಬಂತು. ಜಪಾನೀ ಕಲಾಶಾಖೆಗಳಲ್ಲಿ ಅತ್ಯಂತ ಪ್ರಸಿದ್ಧವಾದುದೆಂದರೆ ಕೋಎಟ್ಸು ಎಂಬುದು. ಇದರ ಪ್ರವರ್ತಕರು ಕೋಎಟ್ಸು (1557-1637) ಮತ್ತು ಕೋರಿನ್ (1658-1716). ಪಶ್ಚಿಮ ಜಪಾನಿನಲ್ಲಿ ಉಕೀಯಾಯೆ (ಇದು ಪ್ರಾಣ ಎಂಬುದಕ್ಕೆ ಜಪಾನೀ ಪದ) ಶಾಖೆ ಪ್ರಸಿದ್ಧವಾಯಿತು. ಈ ಶಾಖೆಯವರು ಮರದ ಪಡಿಯಚ್ಚಿನ ಕೆಲಸದಲ್ಲಿ ತುಂಬ ಕುಶಲರು. ಬಡವರು ವರ್ಣಚಿತ್ರಗಳನ್ನು ಕೊಳ್ಳಲಾರದುದರಿಂದ ಇವರಿಗಾಗಿ ಈ ಪಡಿಯಚ್ಚಿನಿಂದ ಮುದ್ರಿಸಿದ ಪ್ರತಿಕೃತಿಗಳನ್ನು ಒದಗಿಸುವ ಉದ್ದೇಶ ಈ ಶಾಖೆಯ ಕಲಾವಿದರಿಗಿತ್ತು. ಇವರು ನಿಸರ್ಗವನ್ನು ಬಿಟ್ಟು ಜನಜೀವನ, ರೈತಾಪಿಜನ, ಕೂಲಿಕಾರರು ಇವರೆಲ್ಲರ ಸಾಮಾನ್ಯ ಚಿತ್ರಗಳನ್ನು ಬಿಡಿಸುವುದರಲ್ಲೇ ನಿಷ್ಣಾತರಾಗಿದ್ದರು. (ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ